ಬಕ
 	
1. ಏಕಚಕ್ರನಗರದ ಬಳಿಯಲ್ಲಿನ ಬೆಟ್ಟದಲ್ಲಿ ವಾಸವಾಗಿದ್ದ ಒಬ್ಬ ರಾಕ್ಷಸ. ಪ್ರತಿದಿನ ನಗರಕ್ಕೆ ನುಗ್ಗಿ ಕೈಗೆ ಸಿಕ್ಕಿದವರನ್ನೆಲ್ಲ ಕೊಂದು ತಿನ್ನುತ್ತಿದ್ದ. ಇವನ ಉಪಟಳದಿಂದ ಕಂಗಲಾದ ಜನ ತಮ್ಮನ್ನು ರಾಕ್ಷಸನಿಂದ ರಕ್ಷಿಸಬೇಕೆಂದು ರಾಜನಲ್ಲಿ ಮೊರೆಯಿಟ್ಟರು. ರಾಜ ಬಕನೊಂದಿಗೆ ಒಂದು ಒಪ್ಪಂದ ಮಾಡಿಕೊಂಡ, ಅದರ ಪ್ರಕಾರ ಪ್ರತಿದಿನ ಒಂದು ಬಂಡಿ ಅನ್ನ ಒಂದು ಜೊತೆ ಎತ್ತು ಮತ್ತು ಒಬ್ಬ ಮನುಷ್ಯನನ್ನು ಬಕನ ಆಹಾರಕ್ಕಾಗಿ ಕಳಿಸಿಕೊಡಬೇಕಿತ್ತು. ಇವನ್ನು ತಿಂದು ಆತ ಊರಿಗೆ ಬಂದು ಉಪದ್ರವ ಕೊಡದೆ ಬೆಟ್ಟದಲ್ಲಿಯೆ ಇರಬೇಕಿತ್ತು. ಸರದಿಯಂತೆ ಜನ ಈ ಒಪ್ಪಂದವನ್ನು ಪರಿಪಾಲಿಸಿಕೊಂಡು ಬರುತ್ತಿದ್ದರು.
ಏಕಚಕ್ರನಗರದಲ್ಲಿ ಪಾಂಡವರು ಕೆಲಕಾಲ ವಾಸವಾಗಿದ್ದರಷೆ.್ಟ ಪಕ್ಕದ ಮನೆಯ ಬಡಬ್ರಾಹ್ಮಣ ತನ್ನ ಒಬ್ಬನೆ ಮಗನನ್ನು ಬಕನಿಗೆ ಒಪ್ಪಿಸಬೇಕಾಗಿ ಬಂದಾಗ ಹಾಗೆ ಮಾಡಲಾರದೆ ಗೋಳಿಡುತ್ತಿರಲು ಅದನ್ನು ಕಂಡು ಮನಕರಗಿದ ಕುಂತಿ ತನಗಿರುವ ಐವರು ಮಕ್ಕಳಲ್ಲಿ ಒಬ್ಬನನ್ನು ಬಕನಿಗೆ ಆಹಾರವಾಗಿ ಕಳುಹಿಸಿ ಆಕೆಯ ಮಗನ ಪ್ರಾಣ ಉಳಿಸುವುದಾಗಿ ಹೇಳಿ ಬಕನ ಆಹಾರವಾಗಿ ಭೀಮನನ್ನು ಕಳುಹಿಸಿಕೊಟ್ಟಳು. ಭೀಮ ತನ್ನ ಬಲದಿಂದ ಬಕನನ್ನು ಸಂಹರಿಸಿ ಆ ಪಟ್ಟಣದ ಜನರನ್ನು ರಕ್ಷಿಸಿದ.

2. ಕಂಸನ ಪರಿವಾರದ ಒಬ್ಬ ರಾಕ್ಷಸ. ಬಲರಾಮ ಕೃಷ್ಣರು ಗೋಪಾಲಕರೊಂದಿಗೆ ಕರುಗಳನ್ನು ಮೇಯಿಸುತಿದ್ದಾಗ ಈತ ಬಕರೂಪದಿಂದ ಕೃಷ್ಣನನ್ನು ನುಂಗಿ ತನ್ನ ದವಡೆಗಳಲ್ಲಿ ಅಗಿದು ನೆಲಕ್ಕೆ ಉಗುಳಿದ. ಕೃಷ್ಣನಿಗೆ ಗಾಯವಾಗದಿರುವುದನ್ನು ಕಂಡು ಕೋಪದಿಂದ ಅವನನ್ನು ತನ್ನ ಕೊಕ್ಕಿನಿಂದ ಕುಕ್ಕಲಾಗಿ ಕೃಷ್ಣ ಅದರ ಕೊಕ್ಕನ್ನು ಹಿಡಿದು ಎರಡಾಗಿ ಸೀಳಿ ಕೊಂದ.
(ಡಿ.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ